ಜಯಸಿಂಹ, ಸವಾಯಿ
1686-1743. ಭಾರತದ ಐದು ಪ್ರಧಾನ ನಗರಗಳಲ್ಲಿ (ದೆಹಲಿ, ಜಯಪುರ, ಉಜ್ಜಯಿನಿ, ಬನಾರಸ್ ಮತ್ತು ಉತ್ತರ ಮಥುರಾ) ಖಗೋಳ ವೀಕ್ಷಣಾಲಯಗಳನ್ನು ನಿರ್ಮಿಸಿ, ಆಕಾಶದ ದೃಶ್ಯಗಳನ್ನು ಅವಲೋಕಿಸಿ ನಿರ್ದುಷ್ಟವಾದ ಖಗೋಳಶಾಸ್ತ್ರೀಯ ಕೋಷ್ಟಕಗಳನ್ನು ತಯಾರಿಸಿದ ವಿಜ್ಞಾನಿ ಮತ್ತು ರಾಜನೀತಿಜ್ಞ. ಈತ ಜಯಪುರದ ಮಹಾರಾಜನೂ ಆಗಿದ್ದ. 13ನೆಯ ವಯಸ್ಸಿನಲ್ಲಿ (1699) ಅಂಬಾರ್ ಸಂಸ್ಥಾನದ ಅಧಿಪತಿಯಾದ. ಆಗ ಭಾರತದ ಚಕ್ರವರ್ತಿಯಾಗಿದ್ದ ಮಹಮ್ಮದ್ ಷಾ (1719-1748) ಈತನನ್ನು ಆಗ್ರ ಸಂಸ್ಥಾನದ ರಾಜ್ಯಪಾಲನಾಗಿ ನೇಮಿಸಿದ (1719). ಮಾಳ್ವ ರಾಜ್ಯಪಾಲನಾಗಿ ಮುಂದೆ ಚಕ್ರವರ್ತಿಯ ಅಪ್ಪಣೆ ಪಡೆದು, ರಾಜ್ಯಾಡಳಿತೆಯ ಹೊಣೆಯಿಂದ ನಿವೃತ್ತಿಹೊಂದಿ, ಖಗೋಳಶಾಸ್ತ್ರದ ಅಧ್ಯಯನದಲ್ಲೆ ನಿರತನಾದ. ಈತನಿಂದ ಖಗೋಳಶಾಸ್ತ್ರದ ಅಧ್ಯಯನಕ್ಕೆ ಹೊಸ ತಿರುವು ದೊರೆತದ್ದರಿಂದ ಚಕ್ರವರ್ತಿ ಮಹಮ್ಮದ್ ಷಾ ತನ್ನ ಮೆಚ್ಚುಗೆಯನ್ನು ಸೂಚಿಸಲು ಜಯಸಿಂಹನಿಗೆ ಸವಾಯಿ ಎಂಬ ಬಿರುದನ್ನು ಕೊಟ್ಟ. ಈ ಪದದ ಅರ್ಥ ಒಂದೂಕಾಲು ಎಂದು. ಆಗಿನ ಕಾಲದ ರಾಜರುಗಳಲ್ಲೆಲ್ಲ ಜಯಸಿಂಹ ಒಂದೂಕಾಲು ಪಾಲು ಉತ್ತಮನಾದವನು ಎಂದು ಈ ಬಿರುದಿನಿಂದ ಸೂಚಿತವಾಗುತ್ತದೆ. ಇಂದಿಗೂ ಜಯಸಿಂಹನ ವಂಶದವರು ಈ ಬಿರುದನ್ನು ಹೊಂದಿರುವರು. 1743ರಲ್ಲಿ ಈತ ಗತಿಸಿದ.

ಜಯಸಿಂಹನಿಗೆ ಬಾಲ್ಯದಿಂದಲೂ ಖಗೋಳಶಾಸ್ತ್ರದಲ್ಲಿ ಉತ್ಕಟಾಸಕ್ತಿ. ಅದರ ವಿಶೇಷವಾದ ಅಧ್ಯಯನಕ್ಕಾಗಿ ಜಯನಗರ ಅಥವಾ ಜಯಪುರ ಎಂಬ ನಗರವನ್ನು 1728ರಲ್ಲಿ ನಿರ್ಮಿಸಿ ತನ್ನ ಅಧ್ಯಯನದ ಕೇಂದ್ರವನ್ನಾಗಿ ಮಾಡಿಕೊಂಡ. ಆಗಿನ ಕಾಲದಲ್ಲಿ ನಾನಾ ಸಿದ್ಧಾಂತಗಳ ಆಧಾರದಿಂದ ತಯಾರಾಗಿ ಬಳಕೆಯಲ್ಲಿದ್ದ ಖಗೋಳ ಶಾಸ್ತ್ರೀಯ ಕೋಷ್ಟಕಗಳಲ್ಲಿ ಅನೇಕ ದೋಷಗಳನ್ನು ಗಮನಿಸಿ, ದೋಷರಹಿತವಾದ ಮತ್ತು ಯಾವುದಾದರೊಂದು ಸಿದ್ಧಾಂತಕ್ಕೆ ಒಳಪಟ್ಟಿರುವ ಕೋಷ್ಟಕಗಳನ್ನು ತಯಾರಿಸಬೇಕೆಂದು ನಿಶ್ಚಯಿಸಿದ. ಇದಕ್ಕಾಗಿ ಜಯಸಿಂಹ ಹಿಂದೂ, ಮುಸ್ಲಿಮ್ ಮತ್ತು ಯೂರೋಪಿಯನ್ ಪದ್ಧತಿಗಳ ಖಗೋಳಶಾಸ್ತ್ರ ಗ್ರಂಥಗಳನ್ನು ಓದಿ 1728ರಲ್ಲಿ ಚಕ್ರವರ್ತಿಯ ಹೆಸರಿನಲ್ಲಿ ಜಿûೀeóï ಮಹಮ್ಮದ್ ಷಾಹಿ ಎಂಬ ಖಗೋಳ ಶಾಸ್ತ್ರೀಯ ಕೋಷ್ಟಕಗಳನ್ನು ತಯಾರಿಸಿದ. ಜಯಸಿಂಹ ಅಧ್ಯಯನ ಮಾಡಿದ ಗ್ರಂಥಗಳಲ್ಲಿ ಟಾಲೆಮಿಯ ಆಲ್ಮಜೆಸ್ಟ್, ಉಲೂಣ್ ಬೇಗ್‍ನ ಖಗೋಳ ಶಾಸ್ತ್ರೀಯ ಕೋಷ್ಟಕಗಳು. ಅರಿಸ್ಟಾಟಲನ ಕೆಲವು ಗ್ರಂಥಗಳು, ಲಾಹೆರ್‍ನ ಖಗೋಳಶಸ್ತ್ರೀಯ ಕೋಷ್ಟಕಗಳು, ಫ್ಲೇಮ್‍ಸ್ಟೀಡನ ಹಿಸ್ಟೋರಿಯಾ ಸೆಲೆ ಸ್ಟಿಸ್ ಬ್ರಿಟಾನ್ನಿಕಾ, ಯೂಕ್ಲಿಡನ ಎಲಿಮೆಂಟ್ಸ್, ಸಮತಲ ಮತ್ತು ಗೋಳೀಯ ತ್ರಿಕೋಣಮಿತಿಯನ್ನು ಕುರಿತ ಕೆಲವು ಪಾಶ್ಚಾತ್ಯ ಗ್ರಂಥಗಳು ಮುಖ್ಯವಾದವು. ತನಗೆ ಅಧ್ಯಯನದಲ್ಲಿ ನೆರವಾಗಲು ಭಾರತೀಯ, ಮುಸ್ಲಿಮ್ ಮತ್ತು ಯೂರೋಪಿಯನ್ ಖಗೋಳಶಾಸ್ತ್ರಜ್ಞರನ್ನು ಈತ ನೇಮಕ ಮಾಡಿಕೊಂಡಿದ್ದ. ಖಗೋಳ ಶಾಸ್ತ್ರದ ಅಧ್ಯಯನದಲ್ಲಿ ತನ್ನ ಪ್ರಧಾನ ಸಹಾಯಕನಾದ, ಅರಾಬಿಕ್ ಮತ್ತು ಸಂಸ್ಕøತ ಭಾಷೆಗಳ ಹಾಗೂ ಭಾರತೀಯ ಖಗೋಳಶಾಸ್ತ್ರ ವಿದ್ವಾಂಸನಾದ, ಸಾಮ್ರಾಟ್ ಜಗನ್ನಾಥನೆಂಬ ಪಂಡಿತನಿಂದ ಈತ ಯೂಕ್ಲಿಡನ ಎಲಿಮೆಂಟ್ಸ್ ಎಂಬ ಗ್ರಂಥವನ್ನು ರೇಖಾಗಣಿತ ಕ್ಷೇತ್ರ ವ್ಯವಹಾರ ಎಂಬ ಹೆಸರಿನಲ್ಲಿ ಸಂಸ್ಕøತಕ್ಕೆ ಅನುವಾದ ಮಾಡಿಸಿದ (1730). ಅರಾಬಿಕ್ ಭಾಷೆಗೆ ಮಿಜಾಸ್ತಿ ಎಂಬ ಹೆಸರಿನಲ್ಲಿ ಅನುವಾದವಾಗಿದ್ದ ಟಾಲೆಮಿಯ ಆಲ್ಮಜೆಸ್ಟ್ ಎಂಬ ಗ್ರಂಥವನ್ನು ಜಗನ್ನಾಥ 1731ರಲ್ಲಿ ಸಮ್ರಾಟ್ ಜಗನ್ನಾಥ ಎಂಬ ಹೆಸರಿನಿಂದ ಸಂಸ್ಕøತಕ್ಕೆ ಅನುವಾದಿಸಿದ. ಇದಕ್ಕೆ ಸಿದ್ಧಾಂತಸಾರ ಕೌಸ್ತುಬವೆಂದೂ ಹೆಸರುಂಟು. ಇದು ಆಲ್ಮಜೆಸ್ಟ್ ಗ್ರಂಥದ ಕೇವಲ ಅನುವಾದ ಅಲ್ಲ. ಬದಲು ಜಯಸಿಂಹನಿಂದ ನಿರೂಪಿತವಾದ ಖಗೋಳಶಾಸ್ತ್ರದ ಹೊಸಪದ್ಧತಿಗಳನ್ನೂ ಒಳಗೊಂಡಿರುವುದಾಗಿ ಜಯಸಿಂಹ ಹೇಳಿದ್ದಾನೆ. ಇವು ಮುದ್ರಿತವಾಗಿರುವಂತೆ ಕಾಣುವುದಿಲ್ಲ. ಹೀಗೆ ಪಾಶ್ಚಾತ್ಯ ವಿಜ್ಞಾನಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಸಂಸ್ಕøತಕ್ಕೆ ಅನುವಾದ ಮಾಡಿಸಿರುವುದಲ್ಲದೆ ಜಯಸಿಂಹ ಸ್ವತಂತ್ರವಾಗಿ ಖಗೋಳದೃಶ್ಯಗಳ ಪರೀಕ್ಷೆಗೆ ಉಪಯುಕ್ತವಾದ ಲೋಹ ಯಂತ್ರಗಳ ರಚನೆಯನ್ನು ಕುರಿತ ಎರಡು ಗ್ರಂಥಗಳನ್ನು ಕೂಡ ರಚಿಸಿದ್ದಾನೆ. ಇವುಗಳಲ್ಲಿ ಯಂತ್ರರಾಜ ಎಂಬ ಗ್ರಂಥ ಛಾಯಾ ಯಂತ್ರದ ರಚನಾಕ್ರಮವನ್ನೂ ಯಂತ್ರರಾಜರಚನಾಪ್ರಕಾರ ಎಂಬ ಗ್ರಂಥ ನಾಕ್ಷತ್ರಿಕ ಹಾಗೂ ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ಕಾಲಗಳನ್ನು ತಿಳಿಯಲು ಸಹಾಯಕವಾಗುವ ಯಂತ್ರದ ರಚನೆಯನ್ನೂ ತಿಳಿಸುತ್ತವೆ. ಇವೂ ಮುದ್ರಣಗೋಂಡಿಲ್ಲವೆಂದು ತೋರುತ್ತದೆ.

ಜಯಸಿಂಹ ಖಗೋಳಶಾಸ್ತ್ರದ ನಾನಾ ಸಿದ್ಧಾಂತ ಗ್ರಂಥಗಳ ಕೇವಲ ಅಧ್ಯಯನದಿಂದ ತೃಪ್ತನಾಗದೆ, ಆ ಶಾಸ್ತ್ರದ ಹಲವು ವಿಷಯಗಳನ್ನು ಪ್ರತ್ಯಕ್ಷವಾಗಿ ತಿಳಿದು ಸಂಗ್ರಹಿಸಲು ಪಾಡ್ರೆ ಮ್ಯಾನ್ಯುಯಲ್ ಎಂಬ ಪೋರ್ಚುಗಲ್ ಕ್ರೈಸ್ತಮಂಡಲಿಯ ಸದಸ್ಯನೊಡನೆ ಕೆಲವು ವಿದ್ವಾಂಸರನ್ನು ಯೂರೋಪಿಗೆ ಕಳುಹಿಸಿದ. ಮಹಮ್ಮದ್ ಷರೀಫ್ ಎಂಬ ವಿದ್ವಾಂಸನನ್ನು ದಕ್ಷಿಣ ಮೇರುವಿನ ಸಮೀಪದ ಒಂದು ಸ್ಥಳಕ್ಕೂ ಮಹಮ್ಮದ್ ಮಹದಿ ಎಂಬ ವಿದ್ವಾಂಸನನ್ನು ಇನ್ನೂ ಆಚಿನ ದ್ವೀಪಗಳಿಗೂ ಕಳುಹಿಸಿದ್ದ. ಅಲ್ಲದೆ ಪಾಶ್ಚಾತ್ಯ ದೇಶಗಳಿಂದಲೂ ಖಗೋಳಶಾಸ್ತ್ರ ಪಂಡಿತರನ್ನು ಜಯಪುರಕ್ಕೆ ಆಹ್ವಾನಿಸಿ ವಿಚಾರಗೋಷ್ಠಿಗಳನ್ನು ಏರ್ಪಡಿಸಿದ್ದ. ಅಂಡ್ರೆಸ್ಟ್ರೋಬೆಲ್ ಎಂಬ ಜರ್ಮನಿಯ ಖಗೋಳಶಾಸ್ತ್ರಜ್ಞನನ್ನು ಕರೆಯಿಸಿ ತನ್ನಲ್ಲೇ ಇರಿಸಿಕೊಂಡಿದ್ದ. ಹೀಗೆ ಖಗೋಳಶಾಸ್ತ್ರದ ನಾನಾ ಸಿದ್ಧಾಂತಗಳ ಪರಿಚಯವನ್ನು ಹೊಂದಿ ಅನಂತರ ವೀಕ್ಷಣಾಲಯಗಳ ನಿರ್ಮಾಣಕಾರ್ಯವನ್ನು ಜಯಸಿಂಹ ಪ್ರಾರಂಭಿಸಿದ. ಲೋಹಗಳಿಂದ ರಚಿತವಾದ ಯಂತ್ರಗಳು ಉಪಯೋಗವಾದಂತೆಲ್ಲ ಸವೆದು ಹೋಗುವುದರಿಂದ ಅವುಗಳಿಂದ ಸೂಚಿತವಾದ ಅಳತೆಗಳು ಒಂದೇ ರೀತಿಯಾಗಿ ಇರುವುದಿಲ್ಲವೆಂದೂ ಅವನ್ನು ಸುಲಭವಾಗಿ ಸರಿಪಡಿಸುವುದು ಸಾಧ್ಯವಲ್ಲವೆಂದೂ ತಿಳಿದು ಅದೇ ಮಾದರಿಯಲ್ಲಿ ಬೃಹದಾಕಾರದ ಹೆಚ್ಚಿನ ನಿಖರತೆಯನ್ನು ಸಾಧಿಸಬಹುದು ಎಂಬುದು ಇನ್ನೊಂದು ಉದ್ದೇಶ. ಕಲ್ಲಿನಿಂದ ನಿರ್ಮಿತವಾದ ಯಂತ್ರಗಳನ್ನು ಒಳಗೊಂಡ ವೀಕ್ಷಣಾಲಯಗಳನ್ನು ನಿರ್ಮಿಸುವುದರಲ್ಲಿ ಆಸಕ್ತನಾದ. ಜಯಸಿಂಹನಿಂದ ರಚಿತವಾದ ಲೋಹಯಂತ್ರಗಳನ್ನು ಈಗಲೂ ನಾವು ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.

ದೆಹಲಿ ವೀಕ್ಷಣಾಲಯ : ಇದು ಜಂತರ್ ಮಂತರ್ (ನೋಡಿ- ಜಂತರ್-ಮಂತರ್) ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಜಯಸಿಂಹನಿಂದ ಮೊಟ್ಟಮೊದಲು ನಿರ್ಮಿತವಾದ ಖಗೋಳ ವೀಕ್ಷಣಾಲಯವಿದು (1734). ಇಲ್ಲಿ ಏಳು ವರ್ಷಗಳ ಕಾಲ ಸತತವಾಗಿ ಖಗೋಳ ದೃಶ್ಯಗಳನ್ನು ಅವಲೋಕಿಸಿ ಜಯಸಿಂಹ ಜಿûೀeóï ಮಹಮ್ಮದ್ ಷಾಹಿ ಎಂಬ ಖಗೋಳಶಾಸ್ತ್ರೀಯ ಕೋಷ್ಟಕಗಳನ್ನು ತಯಾರಿಸಿದ. ಈ ವೀಕ್ಷಣಾಲಯದ ಮುಖ್ಯಾಂಶಗಳು ಈ ರೀತಿಯಾಗಿವೆ :
ಅಕ್ಷಾಂಶ : 280 37 35” ಉತ್ತರಕ್ಕೆ
ರೇಖಾಂಶ : 770 18 5” ಗ್ರೀನಿಚ್‍ನಿಂದ ಪೂರ್ವಕ್ಕೆ
ಸಮುದ್ರ ಮಟ್ಟದಿಂದ ಎತ್ತರ : 212 ಮೀಟರುಗಳು
ಕಾಂತ ವಿಚಲನೆ : 1919ರಲ್ಲಿ ಪೂರ್ವಕ್ಕೆ 10 45 , ವಾರ್ಷಿಕ ವ್ಯತ್ಯಾಸ 3
ಸ್ಥಾನಿಕ ಕಾಲ : ಶಿಷ್ಟಕಾಲದ ತರುವಾಯ 21 ಮಿ. 7.7 ಸೆ.
ಸಮ್ರಾಟ್ ಯಂತ್ರ, ಜೈಪ್ರಕಾಶ್ ಯಂತ್ರ, ರಾಮಯಂತ್ರ, ಮಿಶ್ರಯಂತ್ರ, ಚಿಕ್ಕಸಮ್ರಾಟ್‍ಯಂತ್ರ, ದಕ್ಷಿಣಾವೃತ್ತಿಯಂತ್ರ, ಕರ್ಕರಾಶಿವಲಯ ಯಂತ್ರ ಮತ್ತು ಕೆಲವು ಲೋಹದ ಯಂತ್ರಗಳನ್ನು ಇಲ್ಲಿ ಕಾಣಬಹುದು. ಇವುಗಳಲ್ಲಿ ಮಿಶ್ರಯಂತ್ರ ಜಯಸಿಂಹನ ಮಗ ಮಧುಸಿಂಗ್‍ನಿಂದ ಸೇರಿಸಲ್ಪಟ್ಟುದೆಂದು ಭಾವಿಸಲಾಗಿದೆ.

ಜಯಪುರದ ವೀಕ್ಷಣಾಲಯ : ಜಯಸಿಂಹನಿಂದ ನಿರ್ಮಿತವಾದ (1728) ಈ ನಗರದಲ್ಲಿ 1734ರಲ್ಲಿ ಸಮೀಕ್ಷಾಮಂದಿರದ ನಿರ್ಮಾಣವಾಯಿತು. ಇದರ ಮುಖ್ಯಾಂಶಗಳು ಈ ರೀತಿಯಾಗಿವೆ.
ಅಕ್ಷಾಂಶ : 280 55 27.4” ಉತ್ತರಕ್ಕೆ
ರೇಖಾಂಶ : 750 49 18.7” ಗ್ರೀನಿಚ್‍ನಿಂದ ಪೂರ್ವಕ್ಕೆ
ಸಮುದ್ರಮಟ್ಟದಿಂದ ಎತ್ತರ : 482 ಮೀಟರುಗಳು
ಕಾಂತವಿಚಲನೆ : 1919ರಲ್ಲಿ ಪೂರ್ವಕ್ಕೆ 1035
ಸ್ಥಾನಿಕ ಕಾಲ : ಶಿಷ್ಟಕಾಲದ ತರುವಾಯ 26 ಮಿ.45 ಸೆ.
ಸಮ್ರಾಟ್ ಯಂತ್ರ, ಜೈಪ್ರಕಾಶ್‍ಯಂತ್ರ, ರಾಶಿವಲಯ ಯಂತ್ರ, ಷಷ್ಠಾಂಶ ಯಂತ್ರ, ಕಪಾಲ ಯಂತ್ರ, ರಾಮಯಂತ್ರ, ದಿಗಂಶಯಂತ್ರ, ನಾಡೀವಲಯ ಯಂತ್ರ ಮತ್ತು ದಕ್ಷಿಣಾವೃತ್ತಿಯಂತ್ರಗಳನ್ನು ಇಲ್ಲಿ ಕಾಣಬಹುದು.

ಉಜ್ಜಯಿನಿಯ ವೀಕ್ಷಣಾಲಯ : ಉಜ್ಜಯಿನಿ ಹಿಂದಿನಿಂದಲೂ ಖಗೋಳ ಶಾಸ್ತ್ರದ ಅಧ್ಯಯನದ ಕೇಂದ್ರವಾಗಿದ್ದು ಭಾರತದ ಗ್ರೀನಿಚ್ ಎಂದು ಪ್ರಸಿದ್ಧವಾಗಿದೆ. ಪ್ರಾಚೀನ ಭಾರತದಲ್ಲಿ ಇದು ಅವಂತಿಯೆಂದು ಪ್ರಸಿದ್ಧವಾಗಿದ್ದ ದೇಶದ ರಾಜಧಾನಿ. 1728 ರಿಂದ 1734ರ ಅವಧಿಯಲ್ಲಿ ಜಯಸಿಂಹ ಈ ಸಮೀಕ್ಷಾಮಂದಿರವನ್ನು ನಿರ್ಮಿಸಿದ. ಇದರ ಮುಖ್ಯಾಂಶಗಳು ಈ ರೀತಿಯಾಗಿವೆ :
ಅಕ್ಷಾಂಶ : 280 10 16” ಉತ್ತರಕ್ಕೆ
ರೇಖಾಂಶ : 750 46 3” ಗ್ರೀನಿಚ್‍ನಿಂದ ಪೂರ್ವಕ್ಕೆ
ಸಮುದ್ರಮಟ್ಟದಿಂದ ಎತ್ತರ : 457 ಮೀಟರುಗಳು
ಕಾಂತವಿಚಲನೆ : 1915ರಲ್ಲಿ 00 49, ವಾರ್ಷಿಕ ವ್ಯತ್ಯಾಸ —3
ಸ್ಥಾನಿಕ ಕಾಲ : ಶಿಷ್ಟಕಾಲದ ತರುವಾಯ 26 ಮಿ. 52 ಸೆ.
ಬಹಳ ಶಿಥಿಲವಾಗಿರುವ ಈ ಸಮೀಕ್ಷಾಮಂದಿರದಲ್ಲಿ ಸಮ್ರಾಟ್‍ಯಂತ್ರ, ನಾಡೀವಲಯ ಯಂತ್ರ. ದಿಗಂಶಯಂತ್ರ ಮತ್ತು ದಕ್ಷಿಣಾವೃತ್ತಿಯಂತ್ರಗಳನ್ನು ಕಾಣಬಹುದು.

	ಬನಾರಸ್ ವೀಕ್ಷಣಾಲಯ : ಜಯನಿಂಹನಿಂದ ನಿರ್ಮಿತವಾದ ಸಮೀಕ್ಷಾ ಮಂದಿರಗಳಲ್ಲಿ ಇದು ನಾಲ್ಕನೆಯದು. ಹದಿನೇಳನೆಯ ಶತಮಾನದಲ್ಲಿ ಅಂಬರ್ ಸಂಸ್ಥಾನದ ಒಡೆಯನಾಗಿದ್ದ ಮಾನ್‍ಸಿಂಗ್ ಎಂಬುವನಿಂದ ನಿರ್ಮಿತವಾಗಿದ್ದ ಮಾನಮಂದಿರವೆಂಬ ಮಹಾಸೌಧದ ಮಹಡಿಯ ಮೇಲೆ ಇದು ನಿರ್ಮಿತವಾಗಿದೆ. ಇದರ ಮುಖ್ಯಾಂಶಗಳು ಈ ರೀತಿಯಾಗಿವೆ:
ಅಕ್ಷಾಂಶ : 25º 18' 24.9' ಪೂರ್ವಕ್ಕೆ
ರೇಖಾಂಶ : 83º 0' 46.1' ಗ್ರೀನಿಚ್‍ನಿಂದ ಪೂರ್ವಕ್ಕೆ
ಸಮುದ್ರಮಟ್ಟದಿಂದ ಎತ್ತರ : 107 ಮೀಟರುಗಳು
ಕಾಂತವಿಚಲನೆ : 1919ರಲ್ಲಿ 0º 55' ಪೂರ್ವಕ್ಕೆ
ಸ್ಥಾನಿಕ ಕಾಲ : ಶಿಷ್ಟಕಾಲಕ್ಕೆ 2 ಮಿ. 3 ಸೆ. ಮುಂಚೆ

	ಇಲ್ಲಿ ಸಮ್ರಾಟ್‍ಯಂತ್ರ ನಾಡೀವಲಯ ಯಂತ್ರ ಚಕ್ರಯಂತ್ರ ಮತ್ತು ದಿಗಂಶಯಂತ್ರಗಳನ್ನು ಕಾಣಬಹುದು.

	ಉತ್ತರ ಮಥುರಾ ವೀಕ್ಷಣಾಲಯ: ಜಯಪುರದ ಮಹಾರಾಜನಾಗಿದ್ದ ರಾಜಾಮಾನ್ ಸಿಂಗ್ ಎಂಬುವನಿಂದ ಜೀರ್ಣೋದ್ಧಾರ ಮಾಡಲ್ಪಟ್ಟ ಮಥುರಾ ಕೋಟೆಯ ಮೇಲೆ ಜಯಸಿಂಹ ಈ ಸಮೀಕ್ಷಾ ಮಂದಿರವನ್ನು ನಿರ್ಮಿಸಿದ. ಈಗ ಇದು ಸಂಪೂರ್ಣವಾಗಿ ನಾಶಹೊಂದಿ ಇಲ್ಲಿ ನಿರ್ಮಿತವಾದ ಯಂತ್ರಗಳ ಸುಳಿವೇ ಇಲ್ಲ.
ದೆಹಲಿಯ ಸಮೀಕ್ಷಾಮಂದಿರ ಜಯಸಿಂಹನ ಪ್ರಧಾನ ಕೇಂದ್ರವಾಗಿತ್ತು. ಇಲ್ಲಿ ಅವಲೋಕಿಸಿದ ಖಗೋಳ ದೃಶ್ಯಗಳ ಸ್ಥಿರೀಕರಣಕ್ಕಾಗಿ ಬೇರೆ ಬೇರೆ ಸ್ಥಳಗಳಲ್ಲಿ ಸಮೀಕ್ಷಾಮಂದಿರಗಳನ್ನು ನಿರ್ಮಿಸಿ, ಮಧ್ಯಯುಗೀನ ಭಾರತದ ವಿಜ್ಞಾನ ಸಾರ್ವಭೌಮನೆಂದು ಈತ ಕೀರ್ತಿ ಗಳಿಸಿದ್ದಾನೆ. 							(ಕೆ.ವಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ